ಪುರಾವೆ

ನಾನು ಮಳೆ
ಬೀಳುವಾಗ ಯಾರನ್ನು ಕೇಳುವುದಿಲ್ಲ,
ಮೋಡದ ಹೊಟ್ಟೆಯಿಂದ ಜಾರಿ
ಭೂಮಿಯ ನೆತ್ತಿಯ ಮೇಲೆ
ನನ್ನ ಹೆಸರನ್ನು ಬರೆಯುತ್ತೇನೆ.

ನಾನು ಬೆಂಕಿ
ಉರಿಯುವಾಗ ಯಾರ ಅನುಮತಿ ಕೇಳುವುದಿಲ್ಲ,
ಕತ್ತಲೆಯ ಎದೆಗೆ
ಒಂದು ಕೆಂಪು ಅಕ್ಷರವಾಗಿ
ನನ್ನನ್ನು ನಾನು ಬರೆಯುತ್ತೇನೆ.

ನಾನು ಗಾಳಿ
ದಿಕ್ಕುಗಳಿಗೆ ಬೇಡಿಕೆ ಇಡುವುದಿಲ್ಲ,
ಮರಗಳ ಕಿವಿಯಲ್ಲಿ ರಹಸ್ಯಗಳನ್ನು ಹಾಕಿ
ಅವುಗಳ ಎಲೆಗಳಲ್ಲಿ ನೃತ್ಯ ಮಾಡುತ್ತೇನೆ.

ನಾನು ನದಿ
ಹರಿಯಲು ನಕ್ಷೆ ಬೇಕಾಗುವುದಿಲ್ಲ,
ಕಲ್ಲುಗಳ ವಿರೋಧವನ್ನು ತಿನ್ನುತ್ತಾ
ನನ್ನ ದಾರಿಯನ್ನು ನಾನೇ ಹುಟ್ಟುಹಾಕುತ್ತೇನೆ.

ನಾನು ಬೀಜ
ಮಣ್ಣಿನ ಕತ್ತಲೆಯೊಳಗೆ
ನನ್ನ ಬೆಳಕನ್ನು ಬೆಳೆಸಿಕೊಳ್ಳುತ್ತೇನೆ,
ಯಾರೂ ನೋಡದ ಹೊತ್ತಿನಲ್ಲಿ
ಒಂದು ಮರದ ಕನಸಾಗಿ ಮೂಡುತ್ತೇನೆ.

ನಾನು ನೆರಳು
ಬೆಳಕಿನೊಂದಿಗೆ ಹುಟ್ಟಿ
ಅದನ್ನೇ ಪ್ರಶ್ನಿಸುತ್ತೇನೆ,
ಹೋಗುವ ಎಲ್ಲೆಡೆ
ನನ್ನ ಹಿಂದೆಯೇ ನಾನು ಬರುತ್ತೇನೆ.

ನನ್ನ ಹೆಸರು
ಒಂದು ಅಲೆ,
ತೀರಕ್ಕೆ ತಾಕಿದಾಗ ಮಾತ್ರ ಕೇಳಿಸುವುದು.
ನನ್ನ ದೇಹ
ಒಂದು ಕವಿತೆ,
ಓದಲು ಯಾರೂ ಕಲಿಯದ ಭಾಷೆಯಲ್ಲಿ ಬರೆಯಲ್ಪಟ್ಟಿದೆ.
ನನ್ನ ಆತ್ಮ
ಒಂದು ಕಾಡು,
ಅದರೊಳಗೆ ಪ್ರವೇಶಿಸಲು
ಯಾವ ದಾರಿಯೂ ಇಲ್ಲ.

Citizenship Amendment Act
ನನ್ನ ಬೇರುಗಳನ್ನು ಎಣಿಸಿತು
ಆದರೆ ನಾನು ನೆಲವಲ್ಲ,
ನಾನು ಮಳೆಯೆಂದು ಅವರಿಗೆ ತಿಳಿಯಲಿಲ್ಲ.

National Register of Citizens
ನನ್ನ ಹೆಜ್ಜೆಗಳನ್ನು ದಾಖಲಿಸಿತು
ಆದರೆ ನಾನು ದಾರಿಯಲ್ಲ,
ನಾನು ಗಾಳಿಯೆಂದು ಅವರು ಮರೆತರು.

Special Intensive Revision
ನನ್ನ ಹೆಸರನ್ನು ಅಳಿಸಿತು
ಆದರೆ ನಾನು ಅಕ್ಷರವಲ್ಲ,
ನಾನು ಪ್ರತಿಧ್ವನಿಯೆಂದು ಅವರಿಗೆ ತಿಳಿಯಲಿಲ್ಲ.
ನನ್ನೊಳಗೆ
ಒಂದು ಸಮುದ್ರ ಉಸಿರಾಡುತ್ತಿದೆ
ಅಲೆಗಳಂತೆ ನಾನು ಬರುತ್ತೇನೆ, ಹೋಗುತ್ತೇನೆ,
ನೀರಿನ ಸತ್ಯ
ಎಂದಿಗೂ ಉಳಿಯುತ್ತದೆ.

ನಾನು ಮಿಂಚು
ಆಕಾಶವನ್ನು ಎರಡು ಭಾಗ ಮಾಡುವ ಕ್ಷಣದಲ್ಲಿ
ನನ್ನ ಅಸ್ತಿತ್ವವನ್ನು ಹೊಳೆಸುತ್ತೇನೆ.

ನಾನು ಧೂಳು
ಕಾಲದ ಹೆಜ್ಜೆಗಳಿಗೆ ಅಂಟಿಕೊಂಡು
ಇತಿಹಾಸವನ್ನು ಮೌನವಾಗಿ ಹೊತ್ತುಕೊಳ್ಳುತ್ತೇನೆ.

ಅವರು ಕೇಳುತ್ತಾರೆ
ನಿನ್ನನ್ನು ಸಾಬೀತು ಮಾಡು
ನಾನು ನಗುತ್ತೇನೆ
ಒಂದು ಕಾಡು ಮಳೆಯಲ್ಲೇ ನಗುವಂತೆ,
ಒಂದು ಬೆಂಕಿ ರಾತ್ರಿ ಹೊತ್ತಲ್ಲಿ ನಗುವಂತೆ.
ಯಾಕೆಂದರೆ
ನನ್ನ ಉಸಿರು
ಯಾವ ಮುದ್ರೆಯಲ್ಲೂ ಸಿಕ್ಕುವುದಿಲ್ಲ,
ನನ್ನ ಹೃದಯ
ಯಾವ ದಾಖಲೆಗೂ ಸೇರೋದಿಲ್ಲ,
ನನ್ನ ಅಸ್ತಿತ್ವ
ಯಾವ ಅನುಮತಿಯನ್ನೂ ಕೇಳೋದಿಲ್ಲ.

ನಾನು ಮಳೆ
ಬೀಳುತ್ತೇನೆ.
ನಾನು ಬೆಂಕಿ
ಉರಿಯುತ್ತೇನೆ.
ನಾನು ನದಿ
ಹರಿಯುತ್ತೇನೆ.
ಅವರು ಇನ್ನೂ ಕೇಳುತ್ತಾರೆ
ಅನುಮತಿ?
ನಾನು ಉತ್ತರಿಸುತ್ತೇನೆ.
ನಾನು ಉಸಿರಾಡುತಿದ್ದೇನೆ
ಉಸಿರಾಡುತ್ತಲೇ ಇದ್ದೇನೆ.

-ದಿಲೀಪ್ ಶಿವ್ಗೌರಿ

ಹೊಸ ಬರಹಗಳು

ಕವನಗಳು

ಕಾಣದಾದೆ ನಿಮ್ಮೊಳಗಿನ ಮೃಗವ…

ಕವನಗಳು

ಎಷ್ಟೊಂದು ಕಾಳಜಿ..!?

ಕವನಗಳು

ಪುರಾವೆ

ಕವನಗಳು

ಪ್ರೀತಿಗಾಗಿ ಬೇಡಬೇಕೂ

ನೋಟಗಳು

ಅಲ್ಪ ಸಂಖ್ಯಾತ ಕೋಮುವಾದಿಗಳು ಬಹು ಸಂಖ್ಯಾತರಾದದ್ದು ಹೇಗೆ?