ಪ್ರೀತಿಗಾಗಿ ಬೇಡಬೇಕೂ

ಹಸಿದ ಮಕ್ಕಳು
ಚೀಲಗಳ ಹೊದ್ದು ಮುದುರಿ ಕುಳಿತಾಗ
ಅವರ ಅಸ್ತಿ ದೂಳಾಗಿ
ಊರಿನ ಪ್ರತಿ ಬೀದಿ-ಬೀದಿಗಳ
ಸುತ್ತಿ ಬರುವಾಗ
ಆಟಿಕೆಗಳ ಮೈದಾನ
ಬಾಂಬು-ಬಂದೂಕುಗಳ ನೆಲೆಯಾದಾಗ
ಕೆಂಪು ರಕ್ತದ ಕಂದಕಗಳೊಳಗೆ
ಕಣಕಣವೂ ಸೀಳಿ ಕೆರಳಿದಾಗ
ಪ್ರೀತಿಗಾಗಿ ಬೇಡಬೇಕೂ.

ಅವನು ಅವಳಾಗಲು
ಅವಳು ಅವನಾಗಲು
ಅವಳು ಅವಳೊಂದಿಗೆ
ಅವನು ಅವನೊಂದಿಗೆ
ಅನ್ಯರು ಅನ್ಯರೊಂದಿಗೆ
ಜೊತೆಯಾಗಿ ಜೀವಿಸಲು
ಪ್ರೀತಿಗಾಗಿ ಬೇಡಬೇಕೂ….

ಎಲ್ಲೋ ನಡಿಯುವ ನಮ್ಮವರ
ಸೆಕೆಂಡುಗಳಿಗೊಂದು ಬಲಿಗೆ
ಚೆಲ್ಲುವ ರಕ್ತಕ್ಕೆ, ಹರಡಿದ ಭಯಕ್ಕೆ
ಕರಪತ್ರಗಳನ್ನೋ… ಪ್ಲಕಾರ್ಡ್ಗಳನ್ನೋ…
ವ್ಯಂಗ್ಯಚಿತ್ರಗಳನ್ನೋ ಹಿಡಿದು
ಟೌನ್ ಹಾಲ್ ನಲ್ಲೋ… ಫ್ರೀಡಂ ಪಾರ್ಕ್ ನಲ್ಲೋ…
“ಮನುಷ್ಯರನ್ನು ಪ್ರೀತಿಸಿ” , “ಮಾನವರಾಗಿ”
ಕೊನೆಗೆ ” ನಾವೂ ಮನುಷ್ಯರು ನಮ್ಮನ್ನೂ ಪ್ರೀತಿಸಿ”
ಎಂದು ಘೋಷಣೆಗಳ ಕೂಗುತ್ತಾ…
ಪ್ರೀತಿಗಾಗಿ ಬೇಡಬೇಕೂ…

ಹೃದಯಗಳಲ್ಲಿ ಪ್ರೀತಿ ಹುಟ್ಟದಿದ್ದರೆ
ಅವರ ಬಾಳ ಅವರು ಜೀವಿಸದಿದ್ದರೆ
ನಾಳೆ ನಮ್ಮವರ ಮಕ್ಕಳು
ನೋಯಿಸಿದವರ ಮಕ್ಕಳು
ನೊಂದವರ ಮಕ್ಕಳು
ಬೆಂದವರ ಮಕ್ಕಳು ಸಾಲಾಗಿ ನಿಂತು
ಇಡೀ ಜಗತ್ತು ಪ್ರೀತಿ ಸಿಗುವವರೆಗೂ
ಹಾಡುತ್ತದೆ… ಬೇಡುತ್ತದೆ…
ಪ್ರೀತಿಗಾಗಿ ನಾಳಿನ ಕೊನೆಯವರೆಗೂ ಬೇಡಲೇಬೇಕೂ…

“ನಾವು ಮನುಷ್ಯರು”
ಪ್ರೀತಿಗಾಗಿ ಬೇಡಬೇಕೂ…

     -ಭರತ್ ರಾಜ್

ಹೊಸ ಬರಹಗಳು

ಕವನಗಳು

ಕಾಣದಾದೆ ನಿಮ್ಮೊಳಗಿನ ಮೃಗವ…

ಕವನಗಳು

ಎಷ್ಟೊಂದು ಕಾಳಜಿ..!?

ಕವನಗಳು

ಪುರಾವೆ

ಕವನಗಳು

ಪ್ರೀತಿಗಾಗಿ ಬೇಡಬೇಕೂ

ನೋಟಗಳು

ಅಲ್ಪ ಸಂಖ್ಯಾತ ಕೋಮುವಾದಿಗಳು ಬಹು ಸಂಖ್ಯಾತರಾದದ್ದು ಹೇಗೆ?