ಅಲ್ಪ ಸಂಖ್ಯಾತ ಕೋಮುವಾದಿಗಳು ಬಹು ಸಂಖ್ಯಾತರಾದದ್ದು ಹೇಗೆ?

ಆರ್ಯರು ಭಾರತಕ್ಕೆ ವಲಸೆ ಬಂದು ಇಲ್ಲಿನ ಮೂಲ ನಿವಾಸಿಗಳ ಸತ್ಯ ಜೀವನವನ್ನು ತಮ್ಮ ಮೌಡ್ಯ ಸಂಸ್ಕೃತಿಯನ್ನು ಬಳಸಿ ವರ್ಣಾಶ್ರಮ ಸೃಷ್ಟಿಸಿ ತಮ್ಮನ್ನು ತಾವು ಮೇಲು ಸ್ತರದಲ್ಲಿರಿಸಿಕೊಂಡು ಶೂದ್ರರನ್ನು ಕೆಳಸ್ತರದಲ್ಲಿರಿಸಿ ವರ್ಣಗಳ ಸೇವೆಗೆ ಇರಿಸಲಾಯಿತು. ಇದನ್ನು ಒಪ್ಪಿಕೊಂಡು ಶೂದ್ರರು ಅವರ ಸೇವೆಮಾಡಲು ಸಿದ್ಧರಾಗಿದ್ದು ಇತಿಹಾಸ . ಈ ವರ್ಣ ವ್ಯವಸ್ಥೆಯನ್ನು ದಿಕ್ಕರಿಸಿ ಅದರಿಂದ ಆಚೆ ಬಂದವರು ಅಸ್ಪೃಶ್ಯರು ಎಂದು ಹೇಳಲಾಗುತ್ತದೆ. ಅಸ್ಪೃಶ್ಯತೆ ಬಗ್ಗೆ ಸಮಾಜ ಶಾಸ್ತ್ರಜ್ಞರು ತಮ್ಮದೇ ಆದಂತಹ ವ್ಯಾಖ್ಯಾನಗಳನ್ನು ನೀಡಿದ್ದರು ಅಂಬೇಡ್ಕರ್ ರವರು ಅಸ್ಪೃಶ್ಯತೆ ಕುರಿತು ಹೀಗೆ ಹೇಳುತ್ತಾರೆ ” ವರ್ಣಾಶ್ರಮ ಸೃಷ್ಟಿಸಿ ಇವರಿಗೆ ಅಸ್ಪೃಶ್ಯರು ಎಂದು ಘೋಷಿಸಿ ನಂತರ ಊರ ಹೊರಗೆ ತಳ್ಳಲಾಯಿತೋ? ಅಥವಾ ಇವರು ಮುಂಚಿನಿಂದಲೂ ಪ್ರತ್ಯೇಕವಾಗಿ ವಾಸಿಸುತ್ತಿದ್ದು ಇವರೆ ಸ್ವತಃ ಅವರನ್ನು ದಿಕ್ಕರಿಸಿದರೆ? ಎಂಬ ಸತ್ಯ ತಿಳಿದಾಗ ಮಾತ್ರ ನಿಜವಾದ ಅಸ್ಪೃಶ್ಯರು ಯಾರು ಎಂದು ತಿಳಿಯಲು ಸಾಧ್ಯ” ಎಂದು ಹೇಳುತ್ತಾರೆ.

ಮುಖ್ಯ ವಿಷಯಕ್ಕೆ ಬರೋಣ ಇಲ್ಲಿ ಶೂದ್ರ ವರ್ಣವನ್ನು ಕೇವಲ ಸೇವೆಗೆಂದು ಸೃಷ್ಟಿಸಿದ್ದಾರೆ ಎಂದು ಕೊಂಡರೆ ತಪ್ಪಾಗುತ್ತದೆ ಏಕೆಂದರೆ ಬಹುಸಂಖ್ಯೆಯ ಜನ ಕಡಿಮೆ ಇರುವ ಜನಸಂಖ್ಯೆಯ ಸೇವೆ ಮಾಡಲು ಒಪ್ಪುವುದಿಲ್ಲ, ಮತ್ತು ಇದು ಸಹಜ ಕೂಡ. ಅದಕ್ಕಾಗಿಯೇ ಅವರು ಸಂಖ್ಯೆಯಲ್ಲಿ ಕಡಿಮೆ ಇದ್ದರೂ ಎಲ್ಲರನ್ನ ಗುಲಾಮರನ್ನಾಗಿ ಮಾಡಿಕೊಳ್ಳುವಲ್ಲಿ ಹೇಗೆ ಯಶಸ್ವಿಯಾದರು? ಅಲ್ಪಸಂಖ್ಯಾತ ಕೋಮುವಾದಿಗಳು ಬಹುಸಂಖ್ಯಾತರಾದದ್ದು ಹೇಗೆ? ಎಂಬ ಪ್ರಶ್ನೆ ಮಾಡಿಕೊಂಡಾಗ ನಮಗೆ ಸಿಗುವ ಸತ್ಯ ಇವರು ಕೇವಲ ದೈಹಿಕ ವಾಗಿ ಗುಲಾಮರನ್ನಾಗಿಸಲು ಯೋಚಿಸಿಲ್ಲ ಈ ರೀತಿ ಮಾಡಿದರೆ ಹೆಚ್ಚು ಕಾಲ ಉಳಿಯುವುದಿಲ್ಲ ಎಂದು ಅವರಿಗೆ ತಿಳಿದಿತ್ತು. ಹಾಗಾಗಿ ಮಾನಸಿಕವಾಗಿ ಗುಲಾಮರನ್ನಾಗಿಸ್ಸಿಕೊಳ್ಳುವ ಬಗ್ಗೆ ಯೋಚಿಸಿದರು. ಅದಕ್ಕಾಗಿಯೇ ವಿದ್ಯೆ , ಆಸ್ತಿ , ಅಧಿಕಾರಗಳನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲಾಯಿತು. ವಿದ್ಯೆ ಇಲ್ಲದೆ ದಡ್ಡರಾಗಿ, ಆಸ್ತಿ ಇಲ್ಲದೆ ಬಡವರಾಗಿ, ಅಧಿಕಾರವಿಲ್ಲದೆ ಗುಲಾಮರಾಗಬೇಕಾಯಿತು. ದೇವರು ,ಧರ್ಮದ ಹೆಸರಿನಲ್ಲಿ ಮಾನಸಿಕವಾಗಿ ಎಂದಿಗೂ ಹೊರಬರಲಾಗದ ಮೌಢ್ಯಕ್ಕೆ ದೂಡಲಾಯಿತು. ಕಾಲ ಕಳೆದಂತೆ ರೂಢಿಯಾಯಿತು, ಸ್ಮೃತಿಪಟಲದಲ್ಲಿ ಬೇರು ಬಿಟ್ಟು ಹೆಮ್ಮರವಾಗಿ ಬೆಳೆದು ಶರಣಾದೆವು. ಎಲ್ಲವೂ ಸರಿ ಎಂದೇ ಭಾವಿಸಿದೆವು. ಕೋಮು ಅಲ್ಪಸಂಖ್ಯಾತರಾದ ಪುರೋಹಿತ ವರ್ಣ ಶೂದ್ರರನ್ನು ತಮ್ಮೊಳಗೆ ಇರಿಸಿಕೊಂಡು ಮತ್ತು ಇವರನ್ನೇ ಬಳಸಿಕೊಂಡು ಅಸ್ಪೃಶ್ಯರ ಮೇಲೆ ಕಾನೂನು ಜಾರಿಮಾಡಲಾಯಿತು. ಶೂದ್ರರು ಮತ್ತು ಅಸ್ಪೃಶ್ಯರು ಒಟ್ಟಿಗೆ ಬೆರೆತರೆ ನಾವು ಅಲ್ಪಸಂಖ್ಯಾತ ರಾಗಿಯೇ ಉಳಿದು ಇವರಿಬ್ಬರನ್ನು ಎದುರಿಸಲು ಕಷ್ಟವಾಗುತ್ತದೆ ಎಂಬ ಕಾರಣಕ್ಕೆ ಇವರಿಬ್ಬರನ್ನು ಪ್ರತ್ಯೇಕಿಸಿ ಶೂದ್ರರನ್ನು ತಮ್ಮಲ್ಲಿಯೇ ಉಳಿಸಿಕೊಳ್ಳಲಾಯಿತು. ತಮ್ಮನ್ನು ಬಹು ಸಂಖ್ಯಾತರೆಂದು ಬಿಂಬಿಸಲಾಯಿತು ಮತ್ತು ಶೂದ್ರರನ್ನು ಅಸ್ಪೃಶ್ಯರನ್ನು ನಿಯಂತ್ರಿಸಲು ಬಳಸಲಾಯಿತು. ಹಾಗಾಗಿ ದೇಶದ ಯಾವುದೇ ಮೂಲೆಯನ್ನು ಗಮನಿಸಿ ಅಸ್ಪೃಶ್ಯರ ಮೇಲೆ ಶೋಷಣೆ ನೇರವಾಗಿ ಶೂದ್ರರಿಂದಲೇ ನಡೆದಿದೆ ಮತ್ತು ಬ್ರಾಹ್ಮಣ್ಯ ಪರೋಕ್ಷವಾಗಿದೆ.

ಈ ನೀಚ ವ್ಯವಸ್ಥೆಯನ್ನು ಮೊದಲು ಅರಿತು ಜನರನ್ನು ಈ ಸಂಕೋಲೆಗಳಿಂದ ಬಿಡಿಸಲು ಪ್ರಯತ್ನಿಸಿದ್ದು ಗೌತಮ ಬುದ್ಧರು. ತಮ್ಮ ವೈಜ್ಞಾನಿಕ ದೃಷ್ಟಿಯಿಂದ, ಕಾರಣ ಮತ್ತು ಪರಿಣಾಮದ ತತ್ವಗಳ ಮೂಲಕ ಮೌಢ್ಯವನ್ನು ನಾಶಮಾಡಲು ಪ್ರಯತ್ನಿಸಿದರು. ಉದಾಹರಣೆಗೆ ಬುದ್ಧರ ತ್ರಿಪಿಟಕದ ಒಂದು ಕಥೆಯನ್ನು ಹೇಳಲು ಬಯಸುತ್ತೇನೆ. ಬುದ್ಧರು ಹಳ್ಳಿಗಳಿಗೆ ಹೋಗಿ ಜನರಿಗೆ ಪ್ರವಚನ ನೀಡುತ್ತಿದ್ದರು. ಹೀಗೆ ಒಂದು ಹಳ್ಳಿಗೆ ಹೋಗಿದ್ದರು ನದಿಯ ಆಚೆ ಬಯಲ ಮರದ ಕೆಳಗೆ ಕುಳಿತು ಜನರಿಗಾಗಿ ತಮ್ಮ ಶಿಷ್ಯರೊಂದಿಗೆ ಕಾಯುತ್ತಾ ಕುಳಿತಿದ್ದರು. ಜನರು ತಡವಾಗಿ ಬಂದರು, ಆಗ ಬುದ್ಧರು ಏಕೆ ತಡವಾಯಿತು ಎಂದು ಪ್ರಶ್ನಿಸಿದಾಗ, ಹಳ್ಳಿಯವನು ಎದ್ದುನಿಂತು ಸ್ವಾಮಿ ನಾವು ಸರಿಯಾದ ಸಮಯಕ್ಕೆ ನದಿಯ ಬಳಿ ಬಂದೆವು ಆದರೆ ನದಿಯ ಮೇಲೆ ಒಂದು ವಿಸ್ಮಯವನ್ನು ಕಂಡೆವು. ಒಬ್ಬ ಹಿಮಾಲಯದ ಸನ್ಯಾಸಿ ನದಿಯ ಮೇಲೆ ನಡೆದುಕೊಂಡು ಬರುತ್ತಿದ್ದ ಅದನ್ನು ನೋಡಿ ಅವರಿಂದ ಆಶೀರ್ವಾದ ಪಡೆದು, ದೋಣಿ ಹಿಡಿದು ಬರಲು ತಡವಾಯಿತು ಎಂದು ಉತ್ತರಿಸಿದ. ಬುದ್ಧರು ಮುಗುಳ್ನಕ್ಕು ಸಂಜೆ ಹೋಗುವಾಗ ಈ ವಿಸ್ಮಯವನ್ನು ನಾವು ನೋಡಬೇಕು ಎಂದು ತಿಳಿಸಲು ಸಂಜೆಯ ವೇಳೆಗೆ ಹಳ್ಳಿಜನ ಬುದ್ಧರನ್ನು ಕರೆದುಕೊಂಡು ನದಿಯ ಬಳಿ ಹೋದಾಗ ಕಿಕ್ಕಿರಿದು ಜನ ಆ ಸನ್ಯಾಸಿಯ ಸುತ್ತ ದರ್ಶನಕ್ಕಾಗಿ ನಿಂತಿದ್ದರು . ಬುದ್ಧರು ನೇರವಾಗಿ ಹೋಗಿ ಸನ್ಯಾಸಿಗೆ ಸಮಸ್ಕರಿಸಿದರು ಸನ್ಯಾಸಿಗೆ ತುಂಬಾ ಆನಂದವಾಯಿತು. ನಂತರ ಬುದ್ಧರು ಸನ್ಯಾಸಿಗೆ ಹೇಳಿದರು ‘ ತಾವು ನದಿಯ ಮೇಲೆ ನಡೆದುಕೊಂಡೇ ಬಂದಿರೆಂದು ಜನ ಹೇಳಿದರು ಹೌದೇ? ಸನ್ಯಾಸಿ ನಗುತ್ತಾ ಹೌದು ಎಂದನು . ಪುನಃ ಕೇಳಿದರು ಈ ವಿದ್ಯೆ ಪ್ರಾಪ್ತಿ ಮಾಡಿಕೊಳ್ಳಲು ಎಷ್ಟು ಸಮಯ ತೆಗೆದುಕೊಂಡಿರಿ ಎಂದರು. ಸನ್ಯಾಸಿ ಗರ್ವದಿಂದ ಹನ್ನೆರಡು ವರ್ಷ ಕಠಿಣ ತಪಸ್ಸು ಮತ್ತು ಅಭ್ಯಾಸ ಮಾಡಿದ್ದೇನೆ ಎಂದನು. ಅಷ್ಟರಲ್ಲಾಗಲೇ ಸಂಜೆಯಾದ್ದರಿಂದ ಎಲ್ಲರೂ ನದಿ ದಾಟಿ ಊರ ಸೇರಲು ಅಂಬಿಗನನ್ನು ನೋಡಿದರು, ಅಂಬಿಗ ಆಗಲೇ ದೋಣಿತುಂಬ ಜನರನ್ನು ತುಂಬಿಕೊಂಡು ಹೊರಡಲು ಸಿದ್ದನಾಗಿದ್ದ, ಇದನ್ನು ಗಮನಿಸಿದ ಬುದ್ಧರು ಸನ್ಯಾಸಿಗೆ ಹೇಳಿದರು ‘ಸನ್ಯಾಸಿಯವವರೆ ಇಷ್ಟೊಂದು ಜನರು ಈ ಸಂಜೆಯಲ್ಲಿ ಆ ಅಂಬಿಗನ ಒಂದೇ ದೋಣಿಯಲ್ಲಿ ಪ್ರಯಾಣಿಸಲು ಸಾಧ್ಯವಿಲ್ಲ , ತಮಗೆ ನದಿಯ ಮೇಲೆ ನಡೆದುಕೊಂಡು ಹೋಗುವ ಶಕ್ತಿ ಇರುವುದರಿಂದ ನಿಮ್ಮ ಜೊತೆಯಲ್ಲಿ ಇವರನ್ನು ಆಚೆಗಿನ ದಡ ಸೇರಿಸಿ ಕತ್ತಲು ಮೂಡುವುದರೊಳಗಾಗಿ ತಮ್ಮ ಮನೆಯನ್ನು ಸೇರುತ್ತಾರೆ ‘ ಎಂದ ತಕ್ಷಣ ಸನ್ಯಾಸಿ ಗಾಬರಿಯಾಗಿ ಕೊಸರಾಡಿ ಅದು ಹೇಗೆ ಸಾಧ್ಯವಾಗುತ್ತದೆ? ಈ ವಿದ್ಯೆಯಿಂದ ನಾನು ಮಾತ್ರ ನಡೆಯಲು ಸಾಧ್ಯ, ಇವರು ಕೂಡ ನಡೆಯಲು ಹನ್ನೆರಡು ವರ್ಷ ಕಠಿಣ ತಪಸ್ಸು ಮತ್ತು ಅಭ್ಯಾಸ ಮಾಡಬೇಕಾಗುತ್ತದೆ ಎಂದಾಗ ಬುದ್ಧರು ನಕ್ಕು ‘ ಹಾಗದರೆ ನಿನಗಿಂತ ಆ ಅಂಬಿಗನ ಲೇಸು, ಒಮ್ಮೆಗೇ ತನ್ನ ವಿದ್ಯೆಯಿಂದ ಹದಿನೈದು ಜನರನ್ನು ದಡ ಸೇರಿಸುತ್ತಾನೆ ‘ ಎಂದರು . ಕೂಡಲೇ ಅಲ್ಲಿಂದ ಸನ್ಯಾಸಿ ಹೊರನಡೆಯುತ್ತಾನೆ, ಬೆಳಿಗ್ಗೆಯಿಂದ ಆಶ್ಚರ್ಯದಿಂದ ಆತನನ್ನು ನೋಡಲು ನೆರೆದಿದ್ದ ಜನ ಬುದ್ಧರು ಹೇಳಿದ ಮಾತು ಕೇಳಿ ಯೋಚಿಸ ತೊಡಗುತ್ತಾರೆ .

ಹೀಗೆ ಸಮಾಜದ ಮೌಡ್ಯವನ್ನು ನಾಶ ಮಾಡಲು ಪ್ರಯತ್ನಿಸಿ ಜನರಲ್ಲಿ ವೈಜ್ಞಾನಿಕ ಚಿಂತನೆಯನ್ನು ಇಡೀ ದೇಶದುದ್ದಗಲಕ್ಕೂ ಬಿತ್ತಲು ನಡೆದಾಗ ಮನುವಾದಿ ಕುತಂತ್ರಿಗಳು ತಮ್ಮ ಕುತಂತ್ರದಿಂದ ಬುದ್ಧ ದಮ್ಮವನ್ನೇ ನಾಶಮಾಡಿ ಭೂ ಗರ್ಭದಲ್ಲಿ ಅದುಮಿಟ್ಟರು. ಈ ಸತ್ಯ ತಿಳಿದ ಅಂಬೇಡ್ಕರ್ ರವರು ಈ ದೇಶದ ಇತಿಹಾಸವನ್ನು ‘ ಬೌದ್ಧ ಧಮ್ಮಕು ಬ್ರಾಹ್ಮಣತ್ವ ಕು ನಿರಂತರ ನಡೆದ ಸಂಘರ್ಷದ ಕಥೆ ‘ ಎಂದು ಅಭಿಪ್ರಾಯ ಪಟ್ಟರು.

ಇತಿಹಾಸದಲ್ಲಿ ಗಮನಿಸಬೇಕಾದ ಇನ್ನೊಂದು ಅಂಶವೆಂದರೆ ಯಾರು ಅಸಮಾನತೆಯ ವಿರುದ್ಧ, ಬ್ರಾಹ್ಮಣ್ಯದ ವಿರುದ್ಧ ದೊಡ್ಡ ಮಟ್ಟದಲ್ಲಿ ಧ್ವನಿ ಎತ್ತಲು ಪ್ರಯತ್ನಿಸಿದ್ದಾರೋ ಅವರೆಲ್ಲರನ್ನೂ ಒಂದಿಲ್ಲೊಂದು ರೀತಿಯಲ್ಲಿ ನಾಶಮಾಡಿದ್ದಾರೆ . ಅಸಲಿಗೆ ಅಂಬೇಡ್ಕರ್ ರವರನ್ನು ಹೊರತು ಪಡಿಸಿ ಬಹುತೇಕ ಅವರೆಲ್ಲರೂ ಶೂದ್ರರಾಗಿದ್ದಾರೆ ಅಂದರೆ ಈಗಿನ ಹಿಂದುಳಿದ ವರ್ಗದ ಜಾತಿಗೆ ಸೇರಿದವರಾಗಿದ್ದಾರೆ. ಹನ್ನೆರಡನೇ ಶತಮಾನದ ಬಸವಣ್ಣನನ್ನು ಕೊಂದಿದ್ದು ಇದೆ ಕಾರಣಕ್ಕೆ . ನಂತರ ಬಸವಣ್ಣನ ಧರ್ಮ ಶೋಷಕ ಧರ್ಮವಾಗಿ ಮಾರ್ಪಟ್ಟಿದ್ದು ದೊಡ್ಡ ದುರಂತ. ಏನೇ ಇರಲಿ ಇತ್ತೀಚೆಗೆ ಕರ್ನಾಟಕದಲ್ಲಿ ಗೌರಿ ಲಂಕೇಶ್, ಕಲಬುರ್ಗಿ ಬಲಿಯಾದದ್ದು ಇದೆ ಕಾರಣಕ್ಕೆ, ಒಬ್ಬ ಅಸ್ಪೃಶ್ಯ ಜಾತಿಗೆ ಸೇರಿದ ವ್ಯಕ್ತಿಯ ಬಗ್ಗೆ ಅವನ ಪ್ರತಿರೋಧದ ಬಗ್ಗೆ, ಅವನು ಎಷ್ಟೇ ಚಿರಾಡಿದರು, ನಿಂದಿಸಿದರು ಮನುವಾದಿಗಳು ತಲೆಕೆಡಿಸಿಕೊಳ್ಳುವುದಿಲ್ಲ. ಆದರೆ ಹಿಂದುಳಿದ ಜಾತಿಗೆ ಸೇರಿದ ವ್ಯಕ್ತಿಯ ಪ್ರತಿರೋಧವನ್ನು ಸಹಿಸುವುದಿಲ್ಲ. ಸಾಹಿತಿ K S ಭಗವಾನ್ ಇದಕ್ಕೆ ತಾಜಾ ಉದಾಹರಣೆ. ಅಂತವರನ್ನು ನಾಶಮಾಡುತ್ತಾರೆ ಇಲ್ಲ ಅವರದ್ದೇ ಸಮುದಾಯ ಬಳಸಿ ತೇಜೋವಧೆ ಮಾಡಿಸಿ ಬಹಿಷ್ಕಕರಿಸುತ್ತಾರೆ. ಆದರೆ ಭಕ್ತಿ ಚಳುವಳಿ ಈ ವಿರೋಧವನ್ನು ಎದುರಿಸಲಿಲ್ಲ, ಏಕೆಂದರೆ ಭಕ್ತಿ ಚಳುವಳಿಯ ಉದ್ದೇಶ ವೈದಿಕತೆಯ ಪುನರುಜ್ಜೀವನ ವಾಗಿತ್ತು. ಮೋಕ್ಷದ ಏಕತ್ವ ಸಾರಿತ್ತು. ಮನುಷ್ಯ ಮನುಷ್ಯರ ನಡುವೆ ಇದ್ದ ಅಸಮಾನತೆಯನ್ನು ಪ್ರಶ್ನಿಸದೆ , ವೈದಿಕತೆಯ ಸಂಪ್ರದಾಯಗಳನ್ನು ಸರಳಿ ಕರಿಸಿತು, ನಮ್ಮಲ್ಲಿ ಏನೇ ಅಸಮಾನತೆಗಳಿದ್ದರು ದೇವರ ಮುಂದೆ ನಾವು ಸಮಾನರು ಎಂಬ ತತ್ವ ಬಿತ್ತಿತು. ಅಂದರೆ ‘ಬ್ರಾಹ್ಮಣತ್ವ ನಿಂತಿರುವುದು ಶೂದ್ರರ ಮೇಲೆ ‘ ಎಂಬುದು ಸ್ಪಷ್ಟ. ಶೂದ್ರರ ಈ ಮಹಾಗೋಡೆ ಇರುವುದರಿಂದ ಅಸ್ಪೃಶ್ಯರ ವಿರೋಧ, ಚೀರಾಟ ಗೋಡೆಯ ಆಚೆ ಇರುವ ಮನುವಾದಿಗಳಿಗೆ ಕೇಳಿಸುವುದಿಲ್ಲ , ಯಾಕೆಂದರೆ ಅವರ ರಕ್ಷಣೆಗೆ ಗೋಡೆಯಾಗಿ ನಿಂತಿರುವುದೇ ಶೂದ್ರರು. ಇದನ್ನು ಅರಿತು ಇದರ ವಿರುದ್ಧ ಚಳುವಳಿ ಮಾಡಿದವರು ಪುಲೆ ದಂಪತಿ, ಶಾಹು ಮಹಾರಾಜ್, ನಾರಾಯಣ ಗುರು, ಪೆರಿಯಾರ್, ನಾಲ್ವಡಿ , ಕಾನ್ಷಿ ರಾಮ್. ಇವರೆಲ್ಲರೂ ಹಿಂದುಳಿದ ಜಾತಿಗಳಿಗೆ ಸೇರಿದ್ದು ಚಳುವಳಿ ಮಾಡಿದರು ಕೂಡ ದೇವರು ಧರ್ಮದ ಕಗ್ಗತ್ತಲ ಮನೆಯಲ್ಲಿ ಕಟ್ಟಿಹಾಕಿರುವ ಶೂದ್ರರನ್ನು ಬಿಡಿಸಲು ಸಾಧ್ಯವಾಗಲಿಲ್ಲ ಇವರೊಂದಿಗೆ ಹೆಜ್ಜೆ ಹಾಕಿದ್ದು ಅಸ್ಪೃಶ್ಯರು ಮಾತ್ರ.

ಇಷ್ಟೆಲ್ಲಾ ಇತಿಹಾಸ ಕಣ್ಣ ಮುಂದೆ ಇದ್ದರೂ ಶೂದ್ರರು ಸತ್ಯ ಅರಿಯದೆ ಅದೇ ವೈದಿಕರ ಮೌಢ್ಯದ ಹೇಸಿಗೆಯಲ್ಲಿ ಬಿದ್ದು ಒದ್ದಾಡುತ್ತಿದ್ದಾರೆ, ಚಡ್ಡಿ ( ಪ್ಯಾಂಟು)ಧರಿಸಿ ಲಾಠಿ ಹಿಡಿದು ಬೀದಿಯಲ್ಲಿ ಹೆಣವಾಗುತ್ತಿದ್ದಾರೆ. ಅಲ್ಪಸಂಖ್ಯಾತ ಕೋಮುವಾದಿಗಳು ಮಾತ್ರ ಮೈ ಬಗ್ಗಿಸಿ ದುಡಿಯದೆ , ಬೀದಿಗಿಳಿದು ಹೋರಾಡದೇ, ಪ್ರಾಣ ಹಾನಿ ಮಾಡಿಕೊಳ್ಳದೆ , ಬಹುಜನರನ್ನು ಮೊಸಗೊಳಿಸಿ ಶತಮಾನಗಳಿಂದ ಅಧಿಕಾರದ ಗದ್ದುಗೆ ಏರಿ ಸಂಭ್ರಮ ಪಡುತ್ತಿದ್ದಾರೆ. ಈ ಕುರಿತು ಎಲ್ಲಾ ದಲಿತ, ಹಿಂದುಳಿದ ,ಆದಿವಾಸಿ , ಅಲ್ಪಸಂಖ್ಯಾತ ಜನರು ಚಿಂತಿಸಿ ಒಂದಾಗ ಬೇಕಿದೆ. ಮಾನ್ಯವಾರ್ ಕಾನ್ಶಿ ರಾಮರು ಈಗಾಗಲೇ ಪ್ರಯತ್ನಿಸಿ ತಮ್ಮ ಹಾದಿಯಲ್ಲಿ ಯಶಸ್ವಿಯಾಗಿ ಮನುವಾದಿಗಳ ಎದೆ ನಡುಗಿಸಿದ್ದರು. ಇವರ ನಂತರ ಮತ್ತೆ ಮುರಿದ ಮನೆಯಾಗಿದೆ ನಾವೆಲ್ಲರೂ ಸೇರಿ ಕಟ್ಟುವ ಕೆಲಸ ಮುಂದುವರೆಸಬೇಕಿದೆ. ಆದರೆ ಎಲ್ಲಿಯ ವರೆಗೆ ಹಿಂದುಳಿದ ಜಾತಿಗಳು ಬ್ರಾಹ್ಮಣತ್ವ ತೊರೆದು ಅವರ ಕಪಿಮುಷ್ಟಿಯಿಂದ ಆಚೆ ಬರುವುದಿಲ್ಲವೋ! ಅಲ್ಲಿಯವರೆಗೂ ಅಲ್ಪಸಂಖ್ಯಾತ ಕೋಮುವಾದಿಗಳು ಬಹುಸಂಖ್ಯಾತ ಸಮುದಾಯವೆಂದು ತಮ್ಮನ್ನು ಬಿಂಬಿಸಿಕೊಂಡು ಈ ದೇಶದ ಮೂಲ ನಿವಾಸಿಗಳನ್ನು ಆಳುತ್ತಲೇ ಇರುತ್ತಾರೆ.

ಜೈ ಭೀಮ್

~~~~~~~~~

ಹರೀಶ್ ಚೋಮನಹಳ್ಳಿ – ಸಾಮಾಜಿಕ ಕಾರ್ಯಕರ್ತ, ಆಪ್ತ ಸಮಾಲೋಚಕ,ರಂಗ ಭೂಮಿ ಕಲಾವಿದ ಮತ್ತು ನಿರ್ದೇಶಕ,.