ಪಕ್ಷಿಯಂತೆ ಸ್ವತಂತ್ರವಾಗಿ ಹಾರ ಬಯಸಿದೆ
– ಅಂಬಿಕಾ. ಎಮ್
ನನ್ನ ಸುತ್ತಾ ಬೇಲಿಯನ್ನು ಹೆಣೆದಿರಿ
ನನ್ನದೇ ಸ್ವಾತಂತ್ರ್ಯ ಪಡೆಯಲು ಗೋಗರೆದೆ, ಹಾರಲು ಪ್ರಯತ್ನಿಸಿದೆ
ಅತ್ಯಾಚಾರವೆಂಬ ಕತ್ತಿಯಿಂದ ನನ್ನ ರೆಕ್ಕೆ ಕತ್ತರಿಸಿದಿರಿ
ಕಾಣದಾದೆ ನಿಮ್ಮೊಳಗಿನ ಮೃಗವ.
ಅರಿಯದ ಕಂದಮ್ಮನಾಗಿ ಅಂಗಳದಲ್ಲಿ ಆಡುತಿದ್ದೆ
ನನ್ನ ಸುತ್ತ ಇರುವವರು ನನ್ನವರೇ ಎಂಬ ಭಾವದಲ್ಲಿದ್ದೆ
ನಿಮ್ಮ ಕಾಮದ ಕಣ್ಣಿನ ಸೂಜಿಯಿಂದ ನನ್ನ ಇರಿಯುವುದಿಲ್ಲ ಎಂಬ ಭ್ರಮೆಯಲ್ಲಿದ್ದೆ
ಇಲ್ಲಿಯೂ ಕಾಣದಾದೆ ನಿಮ್ಮೊಳಗಿನ ಮೃಗವ.
ನಾ ಹೊರಟೆ ಆಗಸ ಸುತ್ತಲು,
ನಾ ಹೊರಟೆ ಸಮಾಜ ಬದಲಿಸಲು…
ನಾ ಹೊರಟೆ ಕಂಡ ಕನಸು ನನಸು ಮಾಡಿಕೊಳ್ಳಲು ಆದರೆ
ಸದಾ ಪ್ರಯತ್ನಿಸಿದಿರಿ ನನ್ನ ಕನಸು ಮೊಟಕುಗೊಳಿಸಲು
ಕಂಡ ಕನಸ ಈಡೇರಿಸ ಹೊರಟ ನನಗೆ
ಬೀದಿ ನಾಯಿಗಳಂತೆ ಎಳೆದು ಬೆತ್ತಲಾಗಿಸಿದಿರಿ
ಕಾಣದಾದೆ ನಿಮ್ಮೊಳಗಿನ ಮೃಗವ.
ಪ್ರತಿದಿನ ಹೆಣ್ಣಿನ ಮೇಲೆ ಶೋಷಣೆ ನಡೆಯುತ್ತಿದ್ದರೂ
ಛಲ ಬಿಡದೆ ಬದುಕಿನ ಹೋರಾಟದಲ್ಲಿ ಸಾಗಿದ
ನನಗೆ ಸಂಸ್ಕೃತಿ,ಆಚಾರ,ಸಂಪ್ರದಾಯ ಎಂಬ ಕಲ್ಲುಗಳಿಂದ ಕಾಲು ಮುರಿಯುತ್ತಿರುವಿರಿ
ಕಾಣದದೆ ನಿಮ್ಮೊಳಗಿನ ಮೃಗವ.
ಹೆಣ್ಣಿಗೆ ಸಮಾನತೆ ಇದೆ, ಹೆಣ್ಣು ದೇವರು ಹೆಣ್ಣು ತಾಯಿ, ಸಮ ಎನ್ನುವ ಬಾಯಿಯಿಂದಲೇ ನನ್ನ ಮೊಲೆ ಕಚ್ಚಿ,ನಾಯಿಯಂತೆ ಎಳೆದಾಡಿ ರಕ್ತಚಲ್ಲಾಡಿಸಿ, ಕತ್ತು ಹಿಸುಕಿ, ನನ್ನ ದೇಹ ಸುಟ್ಟು ಉಸಿರು ನಿಲ್ಲಿಸಿದಿರಿ
ಕಾಣದಾದೆ ನಿಮ್ಮೊಳಗಿನ ಮೃಗವ.
ನೀವಾರು ನನಗೆ ಕೊಡಲು ಸ್ವಾತಂತ್ರವ
ನನ್ನದೇ ಬದುಕು, ನನ್ನದೇ ಕನಸು ನಿಮ್ಮ ಪಾತ್ರವೇನಿದೆ ನನ್ನ ಜೀವನದಲಿ
ನಾ ಒಮ್ಮೆ ತಿರುಗಿ ಬಿದ್ದರೆ ನಿಮ್ಮ ವಿನಾಶವೇ ಸರಿ
ಕಾಲ ಸರಿದಂತೆ ಕಾಣುತಿಹೆನು ನಿಮ್ಮೊಳಗಿನ ಮೃಗವ…

